Get Mystery Box with random crypto!

★ ಜಾಗತಿಕ ಹಣಕಾಸಿನ ಇಂದಿನ ಸ್ಥಿತಿ ಬಗ್ಗೆ ಪಕ್ಷಿ ನೋಟ! (World Economic | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ಜಾಗತಿಕ ಹಣಕಾಸಿನ ಇಂದಿನ ಸ್ಥಿತಿ ಬಗ್ಗೆ ಪಕ್ಷಿ ನೋಟ! (World Economic Situation) (ಹಣಕ್ಲಾಸು) (ಕನ್ನಡ ಪ್ರಭ)
-ರಂಗಸ್ವಾಮಿ ಮೂಕನಹಳ್ಳಿ
Published: 18th February 2021 03:50 AM | Last Updated: 18th February 2021 03:50 AM | A+A A-

ನೀವು ಜಗತ್ತಿನ ಇತಿಹಾಸವನ್ನ ಗಮನಿಸುತ್ತಾ ಬನ್ನಿ. ಹಣಕಾಸು ವ್ಯವಸ್ಥೆ ತೀರಾ ಇತ್ತೀಚಿನದು ಎನ್ನುವ ಅರಿವು ನಿಮ್ಮದಾಗುತ್ತದೆ.

ಇವತ್ತು ನಾವು ವೃತ್ತಿ ನಿರತ ಸಂಸ್ಥೆಗಳನ್ನ ಸೃಷ್ಟಿಸಿದ್ದೇವೆ ಎನ್ನುವ ಹೆಮ್ಮೆ ನಮಗೆಲ್ಲಾ ಇದೆ. ಆದರೆ ಇಂತಹ ಸಂಸ್ಥೆಗಳಲ್ಲಿ ದುಡಿಯುವ ಅಥವಾ ಇಂತಹ ಸಂಸ್ಥೆಗಳನ್ನ ಮುನ್ನಡೆಸುವ ವ್ಯಕ್ತಿಗಳು ಕೂಡ ಮುಂದೇನಾಗಬಹುದು ಎನ್ನುವ ಅರಿವಿಲ್ಲದೆ ಅಥವಾ ಅರಿವಿದ್ದರೂ ಅದನ್ನ ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದರ ಪರಿಣಾಮ ನಾವು ಇಂದು ಜಗತ್ತಿನಲ್ಲಿ ಇಷ್ಟು ದೊಡ್ಡ ಮಟ್ಟದ ಅಸ್ಥಿರತೆಯನ್ನ ಕಾಣುತ್ತಿದ್ದೇವೆ.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಶಕ್ತಿ ದೇಶಗಳು ಒಂದು ಸಭೆಯನ್ನ ಕರೆದವು. ಜಾಗತಿಕ ಹಣಕಾಸು ಸ್ಥಿತಿ ಅಂದಿಗೆ ಹದಗೆಟ್ಟುಹೋಗಿತ್ತು. ಜಗತ್ತಿನ ಎಲ್ಲಾ ದೇಶಗಳೂ ಒಂದಷ್ಟು ಸ್ಥಿರತೆಯನ್ನ ಬಯಸುತ್ತಿದ್ದವು. ಹೀಗಾಗಿ ಅಂದಿನ ದಿನದಲ್ಲಿ ಅತಿ ಹೆಚ್ಚು ಚಿನ್ನದ ಸಂಗ್ರಹ (ಗೋಲ್ಡ್ ರಿಸರ್ವ್) ಹೊಂದಿದ್ದ ಅಮೆರಿಕಾ ದೇಶದ ಕರೆನ್ಸಿ ಡಾಲರ್ನನ್ನ ಜಾಗತಿಕ ಹಣವನ್ನಾಗಿ ಬಳಸಲು ಸಮ್ಮತಿಯನ್ನ ಸೂಚಿಸುತ್ತವೆ. ಇದು 1971ರ ವರೆಗೆ ಚೆನ್ನಾಗಿಯೇ ನಡೆದುಕೊಂಡು ಬರುತ್ತದೆ.

ಗಮನಿಸಿ ಎರಡರಿಂದ ಮೂರು ದಶಕ ಕಳೆಯುವುದರಲ್ಲಿ ಅಮೆರಿಕಾ ಸಾಕಷ್ಟು ಅಭಿವೃದ್ಧಿ ಹೊಂದಿದ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತದೆ. ಇಲ್ಲಿಯವರೆಗೆ ಚಿನ್ನದ ಸಂಗ್ರಹ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಡಾಲರನನ್ನ ಮುದ್ರಿಸಲಾಗುತ್ತಿತ್ತು. ಅನಾಯಾಸವಾಗಿ ಜಾಗತಿಕ ಹಣವಾಗಿ ರೂಪುಗೊಂಡ ಡಾಲರ್ ನ್ನು ಬಳಸಿಕೊಂಡು ಅಮೆರಿಕಾದ ಹಣಕಾಸು ತಜ್ಞರು, ರಾಜಕಾರಿಣಿಗಳು, ಇತರೆ ಅಧಿಕಾರಿಗಳು ಚಿನ್ನದ ಸಂಗ್ರಹಣೆಗೆ ಒಪ್ಪಿಕೊಂಡಿದ್ದ ಅನುಪಾತ ಮೀರಿ ಹಣವನ್ನ ಮುದ್ರಿಸಿದರು. ಗಮನಿಸಿ ನೋಡಿ ಡಾಲರ್ನಲ್ಲಿ ವಹಿವಾಟು ನಡೆಸುವ ಕಾರಣ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ನಿಗದಿಯಾದ ಮೌಲ್ಯದ ವಸ್ತುವನ್ನ ಪಡೆಯಲು ಚಿನ್ನವನ್ನ ಸಾಗಿಸುವ ಪ್ರಯಾಸವನ್ನ ತಪ್ಪಿಸುವುದಾಗಿತ್ತು. ಚಿನ್ನ ಅಮೆರಿಕಾದ ಫೆಡರಲ್ ಬ್ಯಾಂಕಿನಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ಹೀಗಾಗಿ ಡಾಲರ್ ಚಿನ್ನ ಅಲ್ಲಿದೆ ಎನ್ನುವ ನಂಬಿಕೆಯನ್ನ ನೀಡುವ ಒಂದು ಕರಾರು ಪತ್ರ ಅಥವಾ ಪ್ರಾಮಿಸರಿ ಪೇಪರ್ ನಂತೆ ಬಳಕೆಯಾಗುತ್ತಿತ್ತು. ಯಾವಾಗ ಅಮೆರಿಕ ಚಿನ್ನದ ಸಂಗ್ರಹಣೆ ಮೀರಿ ಹಣವನ್ನ ಮುದ್ರಿಸಿತು ಅದು ಒಂದಷ್ಟು ವರ್ಷದಲ್ಲಿ ಜಗತ್ತಿನ ಇತರ ರಾಷ್ಟ್ರಗಳ ಗಮನಕ್ಕೆ ಬಂದಿತು. ಅವರು ತಮ್ಮ ಬಳಿಯಿದ್ದ ಡಾಲರ್ನನ್ನ ಮರಳಿಸಿ ಅಷ್ಟು ಮೌಲ್ಯದ ಚಿನ್ನವನ್ನ ನೀಡುವಂತೆ ದುಂಬಾಲು ಬಿದ್ದವು. 100 ಡಾಲರ್ ಮೌಲ್ಯದ ಚಿನ್ನವಿದ್ದರೆ 2೦೦ ಮೌಲ್ಯದ ಡಾಲರ್ ಚಾಲನೆಯಲ್ಲಿದೆ. ಈಗ ಎಲ್ಲರೂ ಚಿನ್ನವನ್ನ ನೀಡಿ ಎಂದರೆ ಇಲ್ಲದ ಚಿನ್ನವನ್ನ ತರುವುದು ಎಲ್ಲಿಂದ? ಹೀಗಾಗಿ 1971ರಲ್ಲಿ ಡಾಲರ್ ಮುದ್ರಣಕ್ಕೆ ಇದ್ದ ಚಿನ್ನದ ಸಂಗ್ರಹಣೆ ಮೌಲ್ಯ ಮಾಪನ ಪದ್ಧತಿಯನ್ನ ರದ್ದುಗೊಳಿಸಲಾಯಿತು. ಇದು ಕೇವಲ ತಾತ್ಕಾಲಿಕ ಎನ್ನುವ ಘೋಷಣೆಯನ್ನ ಸಹ ಹೊರಡಿಸಲಾಯಿತು. 2021ಕ್ಕೆ ಬರೋಬ್ಬರಿ 50 ವರ್ಷವಾಯಿತು, ತಾತ್ಕಾಲಿಕ ಎಂದ ರದ್ದತಿಯನ್ನ ಇನ್ನೂ ಮುಂದುವರಿಸಿಕೊಂಡು ಬರುತ್ತಿದ್ದೇವೆ.

ಇದರಿಂದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯಾಯ್ತು. ನೀವೇ ಗಮನಿಸಿ ನೋಡಿ 1950 ರಿಂದ 1970ರ ವರೆಗೆ ಮತ್ತು ಅದಕ್ಕೂ ಮುಂಚೆ ಜಗತ್ತಿನೆಲ್ಲೆಡೆ ಸಾಮಾನ್ಯವಾಗಿ ಪುರುಷ ಮನೆಯ ಹೊರಗಡೆ ದುಡಿದು ತರುವುದು ಪದ್ಧತಿಯಾಗಿತ್ತು. ಮಹಿಳೆ ಮನೆಯನ್ನ ತೂಗಿಸಿಕೊಂಡು ಹೋಗುವ ಕಾರ್ಯವನ್ನ ವಹಿಸಿಕೊಂಡಿದ್ದಳು. 1950ರಿಂದ ಮೇಲ್ಪಟ್ಟು ಅಮೇರಿಕಾ ಅತ್ಯಂತ ವೇಗದಲ್ಲಿ ಅಭಿವೃದ್ದಿಯನ್ನ ಕಾಣ ತೊಡಗಿತು. ಯಾವಾಗ ಅಭಿವೃದ್ಧಿ ಹೆಚ್ಚಾಯಿತು, ಜನರ ಕೈಯಲ್ಲಿ ಹಣದ ಹರಿವೂ ಹೆಚ್ಚಾಯ್ತು. ಅದರ ಜೊತೆಗೆ ಆದಾಯವನ್ನ ಮೀರಿದ ಖರ್ಚು ಕೂಡ ಹೆಚ್ಚಾಗುತ್ತಾ ಹೋಯ್ತು. ಅದು ನಮ್ಮ ಗಣನೆಗೆ ಬರಲಿಲ್ಲ. 1970 ರ ನಂತರ ಒಂದು ಆದಾಯದಲ್ಲಿ ಮನೆ ನಡೆಸುವುದು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಖರ್ಚು ಹೆಚ್ಚಾಯ್ತು. ಮನೆಯಿಲ್ಲಿದ್ದ ಗೃಹಿಣಿ ಕೂಡ ಹೊರಗೆ ಬಂದು ದುಡಿಯಲು ಶುರು ಮಾಡಿದಳು. ಇಲ್ಲಿಯವರೆಗೂ ಪರವಾಗಿಲ್ಲ ಎನ್ನಬಹುದು. 1971ರ ನಂತರ ಅಮೇರಿಕಾ ಇಲ್ಲಿಯವರಿಗೆ ಬಜೆಟ್ ಡೆಫಿಸಿಟ್ ನಲ್ಲಿ ಸಾಗುತ್ತ ಬಂದಿದೆ. ಅಂದರೆ ತನ್ನ ದೇಶವನ್ನ ನಡೆಸಲು ಬೇಕಾವಷ್ಟು ಆದಾಯ ಅದರ ಬಳಿ ಕಳೆದ ಐವತ್ತು ವರ್ಷದಿಂದ ಇಲ್ಲ. ಹೀಗೆ ಬೇಕಾದ ಹಣವನ್ನ ಅದು ಸಾಲದ ರೂಪದಲ್ಲಿ ಪಡೆಯುತ್ತದೆ. ಸರಕಾರ ನಡೆದ ದಾರಿಯಲ್ಲಿ ಜನತೆ ಕೂಡ ನಡೆದರು. 1990ರ ನಂತರ ಇಬ್ಬರ ಸಂಪಾದನೆ ಕೂಡ ಸಾಲದಾಯಿತು. ಹೀಗಾಗಿ ಇಂದಿನ ಬದುಕಿಗೆ ಮುಂದಿನ ಹತ್ತಾರು ವರ್ಷ ದುಡಿಯಬಹುದಾದ ಸಂಭ್ಯಾವ ಹಣವನ್ನ ಸಾಲದ ರೂಪದಲ್ಲಿ ಪಡೆದು ಖರ್ಚು ಮಾಡಲಾಯಿತು. ಹೀಗೆ ಸಾಲವೇ ಹಣ, ಸಾಲವೇ ಬದುಕು ಎನ್ನುವ ರೀತಿಯಲ್ಲಿ ಅಮೇರಿಕಾ ಹಣಕಾಸು ವ್ಯವಸ್ಥೆ ಬದಲಾಗಿ ಹೋಯಿತು.

ಪೊಂಝಿ ಸ್ಕೀಮ್ ಸೃಷ್ಟಿಗೆ ಕಾರಣವಾದ ಅಮೇರಿಕಾ ಡೆವಲಪ್ಮೆಂಟ್ ಮಾಡೆಲ್.
ಅಮೇರಿಕಾ ಅರ್ಥ ವ್ಯವಸ್ಥೆಯನ್ನ ಹೇಳುವ ಉದ್ದೇಶ ಬಹಳ ಸರಳ. ಅಮೆರಿಕಾದ ಯಶೋಗಾಥೆಯನ್ನ ನೋಡಿ ಜಗತ್ತು ಅವರನ್ನ ಹಿಂಬಾಲಿಸ ತೊಡಗಿತು. 2007 ವೇಳೆಗೆ ಅಮೇರಿಕಾ ತಾನು ಮಾಡಿದ ತಪ್ಪಿಗೆ ಅತಿ ದೊಡ್ಡ ಬೆಲೆಯನ್ನ ಕಟ್ಟಿತು. ಅದು ಜಗತ್ತಿನ ಮಹಾನ್ ಆರ್ಥಿಕ ಕುಸಿತಕ್ಕೂ ಕಾರಣವಾಯಿತು.

ಮೇಲಿನ ಸಾಲಿನಲ್ಲಿ ಉಲ್ಲೇಖಿಸಿದಂತೆ 1971 ರಿಂದ ಈಚೆಗೆ ಅಮೇರಿಕಾ ಬಜೆಟ್ ಡೆಫಿಸಿಟ್ ನಲ್ಲಿ ನಡೆದು ಬರುತ್ತಿದೆ. ಅಂದರೆ ಗಮನಿಸಿ ಒಟ್ಟು ಆದಾಯ ನೂರು ಡಾಲರ್ ಎಂದುಕೊಂಡರೆ ಒಟ್ಟು ಖರ್ಚು ನೂರಾ ಮೂರು ಅಥವಾ ನೂರಾ ನಾಲ್ಕು ಡಾಲರ್ ಎಂದುಕೊಳ್ಳಿ. ಹೀಗೆ ಕೊರತೆಯಾಗಿರುವ 3 ಅಥವಾ 4 ಡಾಲರ್ ಹಣವನ್ನ ಬಾಂಡ್ ಗಳನ್ನ ವಿತರಣೆ ಮಾಡುವುದರ ಮೂಲಕ ಸರಿದೂಗಿಸಿಕೊಳ್ಳುತ್ತಾ ಬಂದಿದೆ. ಬಾಂಡ್ ಎಂದರೆ ಸಾಲ ಪತ್ರ.