Get Mystery Box with random crypto!

ಹೂಡಿಕೆದಾರ ಅಮೇರಿಕಾ ಸರಕಾರಕ್ಕೆ ಸಾಲ ಕೊಟ್ಟ ಹಾಗೆ, ಬದಲಿಗೆ ಒಂದು ಪೇಪರ್ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

ಹೂಡಿಕೆದಾರ ಅಮೇರಿಕಾ ಸರಕಾರಕ್ಕೆ ಸಾಲ ಕೊಟ್ಟ ಹಾಗೆ, ಬದಲಿಗೆ ಒಂದು ಪೇಪರ್ ನಲ್ಲಿ ಇಷ್ಟು ಹಣವನ್ನ ಪಡೆದಿದ್ದೇನೆ ಇಷ್ಟು ವರ್ಷದ ನಂತರ ಬಡ್ಡಿ ಸೇರಿ ಇಷ್ಟು ಹಣವನ್ನ ನೀಡತ್ತೇನೆ ಎಂದು ಅಮೇರಿಕಾ ಸರಕಾರ ಬರೆದು ಕೊಟ್ಟಿರುವ ಮುಚ್ಚಳಿಕೆ ಪತ್ರ. ಇದು ಒಂದೆರೆಡು ವರ್ಷವಾದರೆ ಹೇಗಾದರೂ ಸಂಭಾಳಿಸಬಹುದು, ಆದರೆ ಕಳೆದ ಐವತ್ತು ವರ್ಷದಿಂದ ಇದೆ ರೀತಿ ನಡೆದು ಬರುತ್ತಿದೆ.

ಗಮನಿಸಿ ಮೊದಲ ವರ್ಷದ ಸಾಲಪತ್ರ ಅಥವಾ ಬಾಂಡ್ 3 ವರ್ಷ ಅಥವಾ 5 ವರ್ಷದ ನಂತರ ವಾಪಸ್ಸು ನೀಡಬೇಕು. ಹೀಗೆ ಮರಳಿ ನೀಡಲು ಮುಂದಿನ ವರ್ಷಗಳಲ್ಲಿ ಖರ್ಚಿಗಿಂತ ಆದಾಯ ಹೆಚ್ಚಾಗಿರಬೇಕು. ಆದರೆ ಪ್ರತಿ ವರ್ಷವೂ ಖರ್ಚು ಆದಾಯಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಪ್ರತಿ ಮೂರು ಅಥವಾ ಐದನೇ ವರ್ಷ ಆ ವರ್ಷದ ಡೆಫಿಸಿಟ್ ಎಷ್ಟಿದೆ ಅದರ ಜೊತೆಗೆ ಪ್ರಥಮ ವರ್ಷದ ಸಾಲವನ್ನ ಹಿಂತಿರುಗಿಸಲು ಎಷ್ಟು ಬೇಕು ಅಷ್ಟು ಹೊಸ ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಹೀಗಾಗಿ ವರ್ಷದಿಂದ ವರ್ಷಕ್ಕೆ ಸಾಲದ ಮೊತ್ತ ಹೆಚ್ಚಾಗುತ್ತಾ ಹೋಗಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆಯನ್ನ ನೋಡೋಣ.

1971ರಲ್ಲಿ 3 ಡಾಲರ್ ಕೊರತೆಯಿತ್ತು ಎಂದುಕೊಳ್ಳೋಣ. ಇದನ್ನ ಡೆಟ್ ಬಾಂಡ್ ವಿತರಿಸುವ ಮೂಲಕ ಪಡೆದುಕೊಂಡು ಆ ವರ್ಷದ ಖರ್ಚನ್ನ ನಿಭಾಯಿಸಿದ್ದಾಯ್ತು. ಆದರೆ ಈ ಮೂರು ಡಾಲರ್ ಜೊತೆಗೆ ಐವತ್ತು ಸೆಂಟ್ಸ್ ಸೇರಿ ಒಟ್ಟು ಮೂರುವರೆ ಡಾಲರ್ ನ್ನು 1974ರಲ್ಲಿ ಮರಳಿ ನೀಡಬೇಕಾಗುತ್ತದೆ. 72ರಲ್ಲಿ ಮತ್ತೆ 3 ಡಾಲರ್ ಕೊರತೆ, 73ರಲ್ಲಿ ಮತ್ತೆ ಕೊರತೆ, 74ರಲ್ಲಿ ಮರಳಿ ನೀಡಬೇಕಾದ ಮೂರವರೇ ಡಾಲರ್ ಜೊತೆಗೆ ಈ ವರ್ಷದ ಕೊರತೆಯನ್ನ ಕೂಡ ಸಾಲ ಎತ್ತುವುದರ ಮೂಲಕ ಸರಿದೂಗಿಸುವ ಕೆಲಸ ಮಾಡಬೇಕಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಪ್ರಥಮ ವರ್ಷ ಕೇವಲ ಇಬ್ಬರು ಹೂಡಿಕೆದಾದರು ಸಾಕಾಗಿತ್ತು. ಎರಡನೇ ವರ್ಷ ನಾಲ್ಕು, ಮೂರನೇ ವರ್ಷಕ್ಕೆ ಎಂಟು, ನಾಲ್ಕನೇ ವರ್ಷಕ್ಕೆ ಹದಿನಾರು, ಹತ್ತನೇ ವರ್ಷಕ್ಕೆ 1024, ಹೀಗೆ 18 ವರ್ಷದ ವೇಳೆಗೆ ಎರಡೂವರೆ ಲಕ್ಷಕ್ಕೂ ಮೀರಿದ ಹೂಡಿಕೆದಾರರ ಅವಶ್ಯಕತೆ ಇರುತ್ತದೆ. ಐವತ್ತನೇ ವರ್ಷಕ್ಕೆ ಎಷ್ಟಾಗಬಹುದು? ನೀವೇ ಲೆಕ್ಕ ಮಾಡಿ. ಇದರ ಅರ್ಥ ಬಹಳ ಸರಳ. ಇದೊಂದು ಡೆಟ್ ಟ್ರ್ಯಾಪ್. ಇದರಿಂದ ಎಂದೆಂದಿಗೂ ಮರಳಿ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವೇ ಇಲ್ಲ. ಇದೆಲ್ಲ ಮರೆತು ಬಿಡೋಣ ಹೊಸ ಹಣಕಾಸು ವ್ಯವಸ್ಥೆ ಕಟ್ಟಿಕೊಳ್ಳೋಣ ಎನ್ನುವ ಹೊಸ ಒಪ್ಪಂದವಾದರೆ ಮಾತ್ರ ಸರಿ, ಇಲ್ಲದಿದ್ದರೆ ಈ ವ್ಯವಸ್ಥೆ ಹೆಚ್ಚು ವರ್ಷ ಮುಂದುವರಿಯಲು ಖಂಡಿತ ಸಾಧ್ಯವಿಲ್ಲ. ಹೀಗೆ ಯಾರಿಂದ ಸಾಲ ಪಡೆದರು ಅವರಿಗೆ ಮರಳಿ ಹಣವನ್ನ ವಾಪಸ್ಸು ನೀಡುವುದು ಕೂಡ ಸಾಧ್ಯವಿಲ್ಲದ ಮಾತು. ಇವತ್ತು ವಿತ್ತ ಪ್ರಪಂಚ ಅದೆಂತಹ ಹುಚ್ಚು ಪರಿಸ್ಥಿತಯಲ್ಲಿದೆ ಎಂದರೆ ನೀವೇ ಕೊಟ್ಟ ಹಳೆ ಸಾಲವನ್ನ ಮರಳಿ ಪಡೆಯಲು ನೀವೇ ಹೊಸ ಸಾಲ ನೀಡಬೇಕು ಅಂತಹ ಪರಿಸ್ಥಿತಿ. ಅಮೇರಿಕಾದಿಂದ ಕೊಟ್ಟ ಸಾಲವನ್ನ ವಾಪಸ್ಸು ಪಡೆಯಲು ಚೀನಾ, ಜಪಾನ್ ಸೇರಿದಂತೆ ಇತರೆ ದೇಶಗಳು ಅವರು ಅವರಿಗೆ ಹೊಸ ಸಾಲವನ್ನ ನೀಡಬೇಕಾಗಿದೆ. ಹೊಸ ಸಾಲ ಹುಟ್ಟದಿದ್ದರೆ ವ್ಯವಸ್ಥೆ ಕುಸಿಯುತ್ತದೆ. ವ್ಯವಸ್ಥೆಯನ್ನ ಜೀವಂತವಾಗಿಡಲು ಹೊಸ ಸಾಲ, ಮತ್ತಷ್ಟು ಸಾಲ, ಹೆಚ್ಚೆಚ್ಚು ಸಾಲ ಮಾಡುತ್ತಿರಲೇಬೇಕು. ಇಂತಹ ಕ್ರಿಯೆಗೆ ಪೊಂಝಿ ಸ್ಕೀಮ್ ಎನ್ನುತ್ತಾರೆ. ಮೂಲ ಹಣ ಎಂದೂ ಮರಳಿ ಬರಲಾರದ ವ್ಯವಸ್ಥೆಯಿದು. ಆಶ್ಚರ್ಯವೆಂದರೆ ಇಂದಿಗೂ ಅಮೆರಿಕನ್ ಡೆಟ್ ಬಾಂಡ್ ಕೊಳ್ಳಲು ಜನ ಮುಗಿಬೀಳುತ್ತಾರೆ. ಇಷ್ಟು ಲೋಪವಿರುವ ವ್ಯವಸ್ಥೆಯಲ್ಲಿನ ಹೂಡಿಕೆ ಅತ್ಯುತ್ತಮ ಎನ್ನುವ ನಂಬಿಕೆಯನ್ನ ಅವರು ನೀಡಿದ್ದು ಅವರ ಮಹಾನ್ ಸಾಧನೆ.

ಹೀಗೆ ಅಮೆರಿಕನ್ ಅರ್ಥ ವ್ಯವಸ್ಥೆಯನ್ನ ನಕಲು ಮಾಡಿದ ವಿಶ್ವದ ಎಲ್ಲಾ ದೇಶಗಳ ಕಥೆ ಕೂಡ ಇಂದಿಗೆ ಸೇಮ್. ಅಮೇರಿಕಾ ಯಾವ ಸ್ಥಿತಿಯಲ್ಲಿದೆ ಅದರ ಅಕ್ಕಪಕ್ಕದಲ್ಲಿ ಜಗತ್ತಿನ ಎಲ್ಲಾ ದೇಶಗಳ ಸ್ಥಿತಿ ಕೂಡ ಅಡ್ಡಾಡುತ್ತಿದೆ. 196 ದೇಶಗಳಲ್ಲಿ ಕೇವಲ 30 ದೇಶಗಳು ಬಜೆಟ್ ಸರ್ಪ್ಲಸ್ ಹೊಂದಿವೆ, ಉಳಿದವುಗಳ ಕಥೆ ಅಮೇರಿಕಾ ಕಥೆ ಹೆಚ್ಚು ಕಡಿಮೆ ಸೇಮ್.

ಇದು 2019 ರ ಅಂತ್ಯದ ವರೆಗಿನ ಕಥೆ. 2020 ರಲ್ಲಿ ಕೊರೋನ ಜಗತ್ತಿನ ಆರ್ಥಿಕತೆಯನ್ನ ಅಲ್ಲೋಲಕಲ್ಲೋಲ ಮಾಡಿಬಿಟ್ಟಿದೆ. ಜಗತ್ತಿನ ಆರ್ಥಿಕತೆ ರಿಸೆಟ್ ಬಟನ್ ಒತ್ತುವವರಿಗಾಗಿ ಕಾಯುತ್ತಿದೆ. ಎರಡನೇ ಮಹಾಯುದ್ಧದ ನಂತರ ಅಂದಿನ ಜಗತ್ತಿನ ಶಕ್ತಿ ಕೇಂದ್ರಗಳು ಕುಳಿತು ಮಾಡಿಕೊಂಡ ಒಪ್ಪಂದ ಅಂದಿನ ದಿನದಲ್ಲಿ ಜಗತ್ತಿನಲ್ಲಿ ಒಂದಷ್ಟು ಸ್ಥಿರತೆಯನ್ನ ನೀಡಿದ್ದು ನಿಜ. ಇದೀಗ ಮತ್ತೆ ಅಂತಹ ಒಂದು ಹೊಸ ಒಪ್ಪಂದದ ಅವಶ್ಯಕತೆಯಿದೆ. ಜಗತ್ತು ಇಂದು ಆರ್ಥಿಕ ಸ್ಥಿರತೆಯನ್ನ ಬಯಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಮಾತುಕತೆಯನ್ನ ಆದಷ್ಟು ಬೇಗ ಪ್ರಾರಂಭಿಸಬೇಕು. ಆದರೆ ಇಂದು ಜಗತ್ತು ಒಡೆದ ಮನೆಯಾಗಿದೆ. ಒಪ್ಪಂದದ ಬಗ್ಗೆ ಮಾತನಾಡಬೇಕಾದ ಸಮಯದಲ್ಲಿ ಇನ್ನಷ್ಟು ಒಡುಕಿನ ಮಾತುಗಳಾಗುತ್ತಿವೆ.

ಕೊನೆ ಮಾತು: ನಿಮಗೆ ಕವಿರತ್ನ ಕಾಳಿದಾಸ ಚಲಚಿತ್ರದಲ್ಲಿ ಕಾಳಿದಾಸನಾಗುವ ಮುನ್ನ ಆತ ತಾನು ಕುಳಿತ ಮರದ ಕೊಂಬೆಯನ್ನ ಕಡಿಯುತ್ತಿದ ದೃಶ್ಯ ನೆನಪಿದೆಯಾ? ಆತ ಮಾಡುತ್ತಿದ್ದದ್ದು ಎಂತಹ ಬುದ್ಧಿಯಿಲ್ಲದ ಕೆಲಸ ಎನ್ನುವುದು ನಿಮಗೆ ಗೊತ್ತು. ಇವತ್ತು ನಮ್ಮ ಅರ್ಥ ವ್ಯವಸ್ಥೆ ಥೇಟ್ ಕಾಳಿದಾಸನಾಗುವುದಕ್ಕಿಂತ ಮುಂಚಿನ ವ್ಯಕ್ತಿಯ ಬುದ್ಧಿಮತ್ತೆಯನ್ನ ಹೊಂದಿದೆ. ಎಚ್ಚೆತ್ತುಕೊಂಡು ಬುದ್ಧಿ ಕಲಿಯದಿದ್ದರೆ ಮರದಿಂದ ಬೀಳುವುದನ್ನ ಯಾರು ತಾನೇ ತಪ್ಪಿಸಲು ಸಾಧ್ಯ? ಕೆಲವು ಮನುಷ್ಯರ ದುರಾಸೆ, ಅಧಿಕಾರದ ಹಪಾಹಪಿ ಜಗತ್ತನ್ನ ಎಲ್ಲಿಗೆ ಕೊಂಡೊಯ್ಯುವುದೋ ಕಾಲವೇ ಉತ್ತರಿಸಲಿದೆ.
#editorial #mainsPreparation #modelQ&A #innews @spardhaloka